ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಯಕ್ಷಗಾನಕ್ಕೆ ರಾಷ್ಟ್ರ ಮಟ್ಟದ ಮನ್ನಣೆ ಸಿಗಬೇಕು : ಪಂಜಾಜೆ

ಲೇಖಕರು :
ವಿಕಾಸ್ ನೇಗಿಲೋಣಿ
ಗುರುವಾರ, ಫೆಬ್ರವರಿ 6 , 2014

ಯಕ್ಷಗಾನ ವೇಷ ಹಾಕಿದರೆ, ಆಟ ಮಾಡಿದರೆ ಯಕ್ಷಗಾನ ಉದ್ಧಾರವಾಗುತ್ತದಾ?

ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ಕಲಾವಿದ ಸೂರ್ಯ ನಾರಾಯಣ ಪಂಜಾಜೆ
ಇದು ಪ್ರಶ್ನೆ ಅಥವಾ ಗೊಂದಲ. ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ. ಹಾಗಂತ ಯಕ್ಷಪ್ರೇಮಿಗಳ ಕಾರಿನ ಹಿಂಭಾಗದಲ್ಲಿ, ವೇದಿಕೆಯ ಮೈಕಿನಲ್ಲಿ ಅನುರಣಿಸುತ್ತದೆ. ಮಳೆಗಾಲದ ರಾತ್ರಿ, ವೀಕೆಂಡಿನ ಹಗಲು ಕಲಾಕ್ಷೇತ್ರದಲ್ಲಿ ಬಣ್ಣಗಳು, ಪಾತ್ರಗಳು ಮೈತಾಳುತ್ತವೆ. ಮೂರು ಗಂಟೆಗಳ ಕಾಲ ನಡೆವ ಯಕ್ಷಗಾನ ಮೇಲೋ, ರಾತ್ರಿಯಿಡೀ ನರ್ತಿಸುವ ಪ್ರಸಂಗ ಮೇಲೋ ಅಂತ ಪೈಪೋಟಿಯ ಮಾತು ಕೇಳುತ್ತದೆ. ಆದರೆ ಯಕ್ಷಗಾನ ದಿನೇದಿನೇ ಹಲವು ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಿದೆ, ಪರಂಪರೆ ಮತ್ತು ಆಧುನಿಕತೆಯ ಮಧ್ಯೆ ಅದಕ್ಕೂ ಹಲವು ಸವಾಲುಗಳು ಎದುರಾಗಿವೆ.

ಇಂಥ ಹೊತ್ತಿಗೆ ಮೈಸೂರಿನಲ್ಲಿ ಬರುವ ಫೆ. 14, 15 ಮತ್ತು 16ಕ್ಕೆ ಅಖೀಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಚಿಂತಕ ಜಿ. ಎಸ್‌. ಭಟ್‌ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ನಾಡಿನ ವಿವಿಧೆಡೆಗಳಲ್ಲಿ ಎಂಡು ಸಮ್ಮೇಳನಗಳನ್ನು ಆಯೋಜಿಸಿ, ಒಂಬತ್ತನೇ ಸಮ್ಮೇಳನಕ್ಕೆ ದಸರಾ ನಗರಿಯನ್ನು ಆಯ್ದುಕೊಳ್ಳಲಾಗಿದೆ. ಸಮ್ಮೇಳನವನ್ನು ಆಯೋಜಿಸಿರುವುದು ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ಕಲಾವಿದ ಸೂರ್ಯ ನಾರಾಯಣ ಪಂಜಾಜೆ ಅವರು ಸಮ್ಮೇಳನದ ನೆಪದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

****************



ಪ್ರಶ್ನೆ : ಸಮ್ಮೇಳನದ ವೈಶಿಷ್ಟéವೇನು?

ಪಂಜಾಜೆ : ಸರ್ಕಾರ ಗುರುತಿಸದ ಯಕ್ಷಗಾನ ಪರಂಪರೆಗೆ ಸೇರಿದ ಹಲವು ಕಲಾ ಪ್ರಕಾರಗಳನ್ನು ಒಂದೆಡೆ ತರುವುದು ಮತ್ತು ನಾವಾಗಲೀ, ಸರ್ಕಾರವಾಗಲೀ-ಗುರುತಿಸದೇ ಹೋದ ಕಲಾವಿದರನ್ನು ಗುರುತಿಸಿ ತಕ್ಕಮಟ್ಟಿಗೆ ಗೌರವಿಸುವುದು. ಇದರೊಂದಿಗೆ ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆ, ಸಂವಾದ, ಪ್ರದರ್ಶನ, ಸನ್ಮಾನಗಳನ್ನು ಏರ್ಪಡಿಸುವುದು.

ಪ್ರಶ್ನೆ : ಯಕ್ಷಗಾನವೆಂದರೆ ಬಡಗು ಅಥವಾ ತೆಂಕು ಮಾತ್ರ ಅಂತ ಆಗಿದೆಯಲ್ಲಾ?

ಪಂಜಾಜೆ : ಹೌದು, ದುರಾದೃಷ್ಟವಶಾತ್‌ ಬಡಗು ಕೂಡ ಇಲ್ಲ, ಯಕ್ಷಗಾನವೆಂದರೆ ತೆಂಕು ಎಂದಾಗಿದೆ. ಆದರೆ ಅದರ ಹೊರತಾಗಿ ಶ್ರೀಕೃಷ್ಣ ಪಾರಿಜಾತವಿದೆ, ದೊಡ್ಡಾಟ, ಸಣ್ಣಾಟಗಳಿವೆ. ನಾವು ಯಕ್ಷಗಾನವೆಂದರೆ ದಕ್ಷಿಣೋತ್ತರ ಕನ್ನಡದ ಕಡೆ ಮಾತ್ರ ನೋಡುತ್ತೇವೆ. ಆದರೆ ಉತ್ತರ ಕರ್ನಾಟಕದಲ್ಲಿ ಯಕ್ಷಗಾನದ ಇನ್ನೊಂದು ಭಾಗವಾದ ಹಲವು ಕಲಾ ಪ್ರಕಾರಗಳಿವೆ. ಅವುಗಳನ್ನೂ ಇದರಡಿ ಅಧ್ಯಯನಕ್ಕೆ, ಚಿಂತನೆಗೆ, ಚರ್ಚೆಗೆ ತರುವುದು ನಮ್ಮ ಉದ್ದೇಶ. ಅದಕ್ಕಾಗಿಯೇ 'ಯಕ್ಷಗಾನ ಅಕಾಡೆಮಿ', 'ಯಕ್ಷಗಾನ ಬಯಲಾಟ ಅಕಾಡೆಮಿ' ಆಗಬೇಕು ಅಂತ ನಾವು ಹೋರಾಡಿದ್ದು.

ಪ್ರಶ್ನೆ : ಯಕ್ಷಗಾನದ ಇವತ್ತಿನ ಸ್ಥಿತಿ ಹೇಗಿದೆ?

ಪಂಜಾಜೆ : ನಾವು ಯಕ್ಷಗಾನದ ಉದ್ದಾರದ ಬಗ್ಗೆ ನಿಜವಾಗಿಯೂ ಬೇರೆ ಬೇರೆ ಥರ ಚರ್ಚೆ ಮಾಡಬೇಕಾಗಿದೆ. ಆಟ ಆಡಿದರೆ, ಹಿರಿಯ ಹಾಗೂ ಪ್ರಸಿದ್ಧ ಕಲಾವಿದರು ಬಣ್ಣ ಹಚ್ಚಿದರೆ ಅದಷ್ಟನ್ನೇ ಯಕ್ಷಗಾನದ ಬೆಳವಣಿಗೆ ಅಂತ ಕರೆಯಲಾಗದು. ಯಕ್ಷಗಾನ ನಿಜಕ್ಕೂ ಬೆಳೆಯಬೇಕಿದ್ದರೆ ಹೊಸಬರು ಯಕ್ಷಗಾನದ ಕಡೆ ಬರಬೇಕು; ಅದು ಕಲಾವಿದರ ರೂಪದಲ್ಲಾದರೂ ಸರಿ, ಪ್ರೇಕ್ಷಕರ ರೂಪದಲ್ಲಾದರೂ ಸರಿ. ಅವರನ್ನು ಕರೆತರುವ ಕೆಲಸ ಆಗಬೇಕು.

ಪ್ರಶ್ನೆ : ಹೇಗೆ?

ಪಂಜಾಜೆ : ದಕ್ಷಿಣ ಕನ್ನಡದಲ್ಲಿ ಈಗ ಯಾವುದೇ ಶಾಲೆ, ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಎಂದರೆ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಅಂದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಟ್ರೈನ್‌ ಮಾಡಿ, ಅವರಿಂದ ಕಾರ್ಯಕ್ರಮವನ್ನು ಕೊಡಿಸುವುದು. ಹೀಗೆ ಮಾಡುವುದರಿಂದ ಪ್ರೇಕ್ಷಕ ಮತ್ತು ಕಲಾವಿದರಿಬ್ಬರೂ ಹುಟ್ಟಿಕೊಳ್ಳುತ್ತಾರೆ. ಇವತ್ತು ಅದು ದಕ್ಷಿಣೋತ್ತರ ಕನ್ನಡಗಳಲ್ಲಿ ಮಾತ್ರ ಇದೆ. ಇಂಥ ಸಂಸ್ಕೃತಿ, ಸಂಪ್ರದಾಯ ಬೇರೆ ಕಡೆಗಳಲ್ಲೂ ಆಗುವಂತಾಗಬೇಕು.

ಪ್ರಶ್ನೆ : ಯಕ್ಷಗಾನ ಸಂಪ್ರದಾಯ ಇಲ್ಲದ ಕಡೆ?

ಪಂಜಾಜೆ : ಯಕ್ಷಗಾನ ಎಂದರೆ ನಾನು ಆಗಲೇ ಹೇಳಿದಂತೆ ತೆಂಕು, ಬಡಗು ಪ್ರಕಾರಗಳಷ್ಟೇ ಅಲ್ಲ, ಉತ್ತರ ಕರ್ನಾಟಕದ ಕಡೆ ಹೋದರೆ ಬಯಲಾಟಗಳಿವೆ, ಶ್ರೀಕೃಷ್ಣ ಪಾರಿಜಾತಗಳಿವೆ. ಆಯಾ ಪ್ರದೇಶದಲ್ಲಿ ಶಾಲಾ-ಕಾಲೇಜು ವಾರ್ಷಿಕೋತ್ಸವಕ್ಕೆ ಇಂಥ ಒಂದು ಪ್ರದರ್ಶನವನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಿ.

ಪ್ರಶ್ನೆ : ಅಷ್ಟೇ ಸಾಕೇ?

ಪಂಜಾಜೆ : ಇಲ್ಲ, ಸರ್ಕಾರ ಇನ್ನೂ ಒಂದು ಪ್ರಮುಖ ಕೆಲಸ ಮಾಡಬೇಕು. ಅದೇನೆಂದರೆ ನುರಿತ ಯಕ್ಷಗಾನ ಕಲಾವಿದರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿ ಅವರಿಂದ ವಾರಕ್ಕೆ ಮೂರ್ನಾಲ್ಕು ತರಗತಿಗಳನ್ನಾದರೂ ಕೊಡಿಸುವಂತೆ ನೋಡಿಕೊಂಡರೆ ಕ್ರಮೇಣ ಯಕ್ಷಗಾನ ಬೆಳೆಯುತ್ತದೆ.

ಯಕ್ಷಗಾನ ಇವತ್ತು ವೃತ್ತಿನಿರತ ಮೇಳಗಳಲ್ಲಿ ಕಾಣಿಸಿಕೊಳ್ಳುವುದೇ ಬೇರೆ, ಸೀಮಿತ ಅವಧಿಯ ಪ್ರದರ್ಶನಗಳಲ್ಲಿ ತೋರುವುದೇ ಬೇರೆ. ಭಾಷೆ ಬಳಕೆ, ಪ್ರಸಂಗ, ನಾಟ್ಯ, ಹಾಸ್ಯ, ಮುಖಭಾವಗಳಲ್ಲಿ ವೃತ್ತಿ ಮೇಳಗಳಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನವೇ ಬೇರೆ. ಯಾಕೆ?

ಯಾಕೆಂದರೆ 'ಪ್ರೇಕ್ಷಕ ಕೇಳುತ್ತಾನೆ' ಅನ್ನುವ ಕಾರಣಕ್ಕೆ ಅಲ್ಲಿ ಆಗಿರುವ ಕೆಲವು ಬದಲಾವಣೆಗಳು. ಪ್ರಸಂಗ ಎಂದರೆ ಅದು ಪೌರಾಣಿಕವೇ ಆಗಿರಬೇಕು ಅಂತ ಹೇಳುವವನು ನಾನು. ಅದಕ್ಕೂ ಮೀರಿ ಐತಿಹಾಸಿಕವಾಗಿರುವ ಪ್ರಸಂಗಗಳನ್ನು ಕಟ್ಟಬಹುದೇ ವಿನಃ ಸಾಮಾಜಿಕ ಪ್ರಸಂಗಗಳಲ್ಲ. ಆದರೆ ಪ್ರೇಕ್ಷಕ ಕೇಳುತ್ತಾನೆಂಬ ಕಾರಣಕ್ಕೆ ಇವತ್ತು ಪ್ರಸಂಗಗಳು, ಕುಣಿತ, ಮಾತುಗಳೆಲ್ಲಾ ಬೇರೆಯದೇ ಸ್ವರೂಪ ಪಡೆದುಕೊಂಡಿರುವುದು ವಿಷಾದನೀಯ.

ಪ್ರಶ್ನೆ : ಇಂಥ ಸಮ್ಮೇಳನಗಳು ಆ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ?

ಪಂಜಾಜೆ : ಏನೂ ಮಾಡಲಿಕ್ಕಾಗೋದಿಲ್ಲ. ಇರುವ ಕಲಾವಿದರನ್ನು ತಿದ್ದುವುದಕ್ಕಾಗುವುದಿಲ್ಲ, ಅವರೊಳಗೇ ಬದಲಾವಣೆ ಬರಬೇಕು. ಆದರೆ ಇವತ್ತು ಸೀಮಿತ ಅವಧಿಯ ಯಕ್ಷಗಾನಗಳಿಂದಾಗಿ ಯಕ್ಷಗಾನದ ಗಾಂಭೀರ್ಯ, ಔಚಿತ್ಯಗಳು ಅಲ್ಲಿ ಉಳಿದುಕೊಂಡಿವೆ. ರಾತ್ರಿ ಯಕ್ಷಗಾನದಲ್ಲಿ ತುಂಬ ನಾಟ್ಯವಾಡುವ ಕಲಾವಿದರೂ ಸೀಮಿತ ಅವಧಿಯ ಯಕ್ಷಗಾನ ಪ್ರರ್ದಶನಕ್ಕೆ ಬಂದಾಗ ಅಲ್ಲಿಯ ಔಚಿತ್ಯವರಿತು ಎಷ್ಟು ಬೇಕೋ ಅಷ್ಟೇ ನಾಟ್ಯವಾಡಿ, ಮಾತುಗಾರಿಕೆಯಲ್ಲೂ ಮೆಚ್ಚುಗೆ ಗಳಿಸಿ ಹೋಗುತ್ತಾರೆ. ಇಂಥ ಜಾಗೃತಿ ಕಲಾವಿದರಲ್ಲೇ ಮೂಡಬೇಕು. ಜೊತೆಗೆ ಹೊಸ ಕಲಾವಿದರನ್ನು ಯಕ್ಷಗಾನದ ಔಚಿತ್ಯದಸಮೇತ ತಯಾರು ಮಾಡಬೇಕು.

ಪ್ರಶ್ನೆ : ಬಯಲಾಟದ ಉಳಿದ ಪ್ರಕಾರಗಳು ಯಕ್ಷಗಾನದಷ್ಟು ಜನಪ್ರಿಯತೆ, ಮನ್ನಣೆಗಳನ್ನು ಯಾಕೆ ಪಡೆದುಕೊಳ್ಳಲಿಲ್ಲ?

ಪಂಜಾಜೆ : ಯಾಕೆಂದರೆ ವಿದ್ಯಾವಂತರ ಪ್ರವೇಶ ಆ ಪ್ರಕಾರಗಳಿಗೆ ಆಗದೇಹೋಗಿದ್ದು. ಈಗ ಯಕ್ಷಗಾನವನ್ನು ಜಾನಪದ ಅಂತ ಕರೆಯುತ್ತಾರೆ, ಹಾಗೆ ನೋಡಿದರೆ ಭರತನಾಟ್ಯವನ್ನೂ ಜಾನಪದ ಅಂತಲೇ ಹೇಳಬಹುದು. ಯಾಕೆಂದರೆ ಜಾನಪದ ಎಂದರೆ ಜನರಿಂದ ಜನರಿಗೆ ಬಂದ ಕಲೆ ಎಂಬರ್ಥ ಅಷ್ಟೇ. ಆದರೆ ನನ್ನ ಪ್ರಕಾರ ಯಕ್ಷಗಾನ ಜಾನಪದ ಮೂಲದಿಂದಲೇ ಬಂದರೂ ಅದಕ್ಕೆ ಶಾಸ್ತ್ರೀಯ ಚೌಕಟ್ಟು ದೊರೆತ ಮೇಲೆ ಅದು ಶಾಸ್ತ್ರೀಯ ಕಲೆಯಾಗಿದೆ. ಅದಕ್ಕೆ ಕಾವ್ಯದ ಸಂಸರ್ಗ, ಸಂಪರ್ಕವೂ ದೊರೆತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಯಕ್ಷಗಾನಕ್ಕೆ ವಿದ್ಯಾವಂತರ ಪ್ರವೇಶವಾದ ಕಾರಣ ಅದಕ್ಕೊಂದು ಬೇರೆಯ ಸ್ವರೂಪ ಬಂದಿತು, ಉಳಿದುಕೊಂಡಿದೆ, ಬೆಳೆಯುತ್ತಲೂ ಇದೆ. ಬಯಲಾಟಕ್ಕೂ ಇಂಥ ಸಾಧ್ಯತೆ ದೊರೆತರೆ ಅದೂ ಪುನಶ್ಚೇತನಗೊಳ್ಳುತ್ತವೆ. ಹಾಗಂತ ಬಯಲಾಟದ ವಿವಿಧ ಪ್ರಕಾರಗಳಲ್ಲಿ ಪಿಎಚ್‌ಡಿ ಮಾಡಿದಾಕ್ಷಣ ಅದು ಬೆಳೆಯುವುದಿಲ್ಲ, ಅದೊಂದು ಶಾಸ್ತ್ರೀಯ ಬೆಳವಣಿಗೆಯನ್ನು ಒಳಗೊಳಗೇ ಕಾಣಬೇಕು. ಅದಕ್ಕೆ ಇಂಥ ವೇದಿಕೆಗಳಲ್ಲಿ ಚರ್ಚೆ ಸಾಧ್ಯವಾಗಬೇಕು, ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಪ್ರಶ್ನೆ : ಬಯಲಾಟ ಅಕಾಡೆಮಿ ಆದರೂ ಅದರಿಂದ ವಿಶೇಷ ಪ್ರಯೋಜನಗಳೇದರೂ ಆಗಿವೆಯಾ?

ಪಂಜಾಜೆ : ದುರಾದೃಷ್ಟವಶಾತ್‌ ಇಲ್ಲ. ಇಲ್ಲಿ ಅಧ್ಯಕ್ಷರಾಗಿ ಶ್ರಮಿಸುವವರು ಪಟ್ಟಾಗಿ ಕುಳಿತು ಸರ್ಕಾರದಿಂದ ಅನುದಾನವನ್ನು ಪಡೆದುಕೊಳ್ಳಬೇಕು ಮತ್ತು ಅದನ್ನು ಸರಿಯಾದ ಯೋಜನೆಗಳಿಗೆ ವಿನಿಯೋಗಿಸಬೇಕು. ಆದರೆ ಆ ಥರದ ಧೈರ್ಯ, ಸಾಹಸ ಕಾಣಿಸುತ್ತಿಲ್ಲ. ಅಧ್ಯಕ್ಷರಾಗಿ ಕೆಲಸ ಮಾಡುವವರು ಕಲಾವಿದರಾಗಿ ಪ್ರತಿಭಾವಂತರಾಗಿರುವುದು ಬೇರೆ, ಈ ಹುದ್ದೆಗಾಗಿ ಓಡಾಡಿ ಕೆಲಸ ಮಾಡಿ ಪಡೆಯಬೇಕಾಗಿದ್ದನ್ನು ಪಡೆಯುವುದು ಬೇರೆಯಲ್ಲವಾ?

ಪ್ರಶ್ನೆ : ಸಮ್ಮೇಳನದ ನಿರ್ಣಯಗಳೇನು?

ಪಂಜಾಜೆ : ಬಹುಮುಖ್ಯವಾಗಿ ಯಕ್ಷಗಾನವನ್ನು ರಾಷ್ಟ್ರೀಯ ಕಲೆಯಾಗಿ ರೂಪಿಸಬೇಕೆಂಬುದು. ಇದು ಕಥಕ್ಕಳಿಯಷ್ಟೇ ಪ್ರಮುಖವಾದ, ಬಹುಶಃ ಅರ್ಥದಾರಿಕೆ, ಮುಖವರ್ಣಿಕೆ, ವಸ್ತ್ರವಿನ್ಯಾಸ, ನಾಟ್ಯಗಳಿಂದ ಕಥಕ್ಕಳಿಗಿಂತ ಹೆಚ್ಚು ಪ್ರಭಾವಶಾಲಿಯಾದ ಕಲೆ ಯಕ್ಷಗಾನ. ಅದಕ್ಕೆ ರಾಷ್ಟ್ರ ಮಟ್ಟದ್ದಲ್ಲದೇ ಹೋದರೂ ರಾಜ್ಯ ಮಟ್ಟದ ಮನ್ನಣೆಯಾದರೂ ದೊರೆಯುವಂತೆ ಮಾಡುವುದು ಸಮ್ಮೇಳನದ ಪ್ರಮುಖ ನಿರ್ಣಯ. ಜೊತೆಗೆ ಸರ್ಕಾರ ಬಯಲಾಟದ ವಿವಿಧ ಪ್ರಕಾರಗಳಿಗೆ ಕೊಡಬೇಕಾದ ಮನ್ನಣೆಯ ಬಗೆಗೂ ನಿರ್ಣಯಗಳಿರುತ್ತವೆ.



ಕೃಪೆ : www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ